Saturday, October 27, 2012

Burude Falls

ಜಲಪಾತಗಳ ಜಿಲ್ಲೆ ಎಂದೇ ಖ್ಯಾತವಾದದ್ದು ಉತ್ತರ ಕನ್ನಡ. ಈ ಜಿಲ್ಲೆಯ ಸಿದ್ಧಾಪುರ ತಾಲುಕಿನಲ್ಲಿರುವ ಬುರುಡೆ ಜೋಗ ನಿಸರ್ಗದ ಸೌಂದರ್ಯವನ್ನು ಅಡಗಿಸಿಕೊಂಡ ಸುಂದರ ಜಲಪಾತ. ತಳಭಾಗದಲ್ಲಿ ನಿಂತು ನೋಡಿದರೆ ಇದರ ಸೌಂದರ್ಯ ಅದ್ಭುತ. ಸುಮಾರು 90 ಮೀ. ಎತ್ತರದಿಂದ ಧುಮುಕುವ ಈ ಜಲಪಾತದ ಸೌಂದರ್ಯ ಸವಿಯಲು ನಮ್ಮ ತಲೆ ಬುರುಡೆಯನ್ನು ಆ ಕಡೆ ಈ ಕಡೆ ತಿರುಗಿಸಿ ನೋಡಲೇಬೇಕು !


ದಟ್ಟ ಅರಣ್ಯದ ಮಧ್ಯದಲ್ಲಿರುವ ಈ ಫಾಲ್ಸ್ ತನ್ನ ಮೋಹಕ ಚೆಲುವಿನಿಂದ ನೋಡುಗರ ಮನಸ್ಸನ್ನು ಸೆಳೆಯುತ್ತದೆ. ಇಳ್ಳಿಮನೆ ಹೊಳೆಯಿಂದ ಹರಿದು ಬಂದ ನೀರು ಇಲ್ಲಿ ಧುಮ್ಮಿಕ್ಕಿ ನಂತರ ಅಘನಾಶಿನಿ ನದಿ ಸೇರುತ್ತದೆ. ಪ್ರಕತಿಯಿಂದ ನಿರ್ಮಿತಗೊಂಡ ಈ ಫಾಲ್ಸ್ ನೋಡಲು ನವಂಬರ್‌ನಿಂದ ಮೇ ವರೆಗೆ ಮಾತ್ರ ಸಾಧ್ಯ.

ಬುದಗಿತ್ತಿ ಹಳ್ಳಿಯಿಂದ ಮುಂದೆ ಅರಣ್ಯದ ಕಿರಿದಾದ ದಾರಿಯಲ್ಲಿ ಮರ ಗಿಡಗಳನ್ನು ಹಿಡಿದುಕೊಳ್ಳುತ್ತ ಕಲ್ಲು ಬಂಡೆಯ ಮೇಲೆ ನಿಧಾನವಾಗಿ ಜಾರುತ್ತ ನಡೆಯಬೇಕು. ತಳಭಾಗಕ್ಕೆ ಇಳಿಯುವುದೇ ತಡ, ಅದರ ಮೋಹಕತೆ, ನೀರಿನ ರಭಸ, ಆ ತಂಪಾದ ವಾತಾವರಣ ದಾರಿಯಲ್ಲಿ ಪಟ್ಟ ಕಷ್ಟವನ್ನೆಲ್ಲ ಮರೆಸುತ್ತದೆ.

ಸೌಂದರ್ಯದ ರಸದೌತಣ ನೀಡುವ ಈ ಫಾಲ್ಸ್ ತುಂಬ ಅಪಾಯಕಾರಿ ಕೂಡ. ಬಂಡೆಗಳ ಮಧ್ಯೆ ಸ್ವಲ್ಪ ಕೆ ತಪ್ಪಿದರೆ ಸಾಕು ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲಿಯ ನೀರಿನಲ್ಲಿ ಈಜಾಡುವದು ತುಂಬಾ ರಿಸ್ಕಿ. ಕೆಲವರು ಈ ರೀತಿಯ ಅಪಾಯಕ್ಕೆ ತುತ್ತಾದರೆ ಇನ್ನು ಕೆಲವು ಮಂದಿ ಸ್ಥಳೀಯರ ಸಹಾಯದಿಂದ ಬಚವಾಗಿದ್ದಾರೆ.

ಮಳೆಗಾಲದಲ್ಲಿ ಈ ಫಾಲ್ಸ್‌ನ ಸೌಂದರ್ಯ ಸವಿಯುವುದು ಅಸಾಧ್ಯ. ಮಾರ್ಗದ ಮಧ್ಯೆ ಎದುರಾಗುವ ಇಳ್ಳಿಮನೆ ಹೊಳೆಗೆ ಬ್ರಿಜ್ ಇಲ್ಲ. ಬಂಡೆಗಳು ತುಂಬಾ ಜಾರುತ್ತವೆ. ಉಂಬಳದ ಕಾಟ ಬೇರೆ. ಹಾಗಾಗಿ ಮಳೆಗಾಲದಲ್ಲಿ ಭೋರ್ಗರೆಯುವ ಶಬ್ದ ಕೇಳಬಹುದೇ ಹೊರತು ವೀಕ್ಷಣೆಗೆ ಹರಸಾಹಸ ಮಾಡಬೇಕು.

ಊಟ-ತಿಂಡಿ ದೊರಕುವ ಸ್ಥಳ ಇಲ್ಲಿ ಇಲ್ಲ. ಹಾಗಾಗಿ ಸಿದ್ಧಾಪುರದಿಂದ ಎಲ್ಲವನ್ನು ತೆಗೆದುಕೊಂಡು ಹೋಗಬೇಕಾದದ್ದು ಅನಿವಾರ್ಯ. ಪುನಃ ಸಿದ್ಧ್ದಾಪುರಕ್ಕೆ ಬಂದು 21 ಕಿ.ಮೀ. ಸಾಗಿದರೆ ವಿಶ್ವವಿಖ್ಯಾತ ಜೋಗ್ ಜಲಪಾತ ನೋಡಬಹುದು. ಸಿದ್ಧಾಪುರ ತಾಲೂಕಿನಲ್ಲೇ ಇರುವ ಉಂಚಳ್ಳಿ ಫಾಲ್ಸ್‌ನ್ನೂ ವೀಕ್ಷಿಸಬಹುದು.

ಹೋಗುವ ಬಗೆ
ಸಿದ್ಧಾಪುರದಿಂದ 28 ಕಿ.ಮೀ ದೂರದಲ್ಲಿದೆ. ಸಿದ್ಧಾಪುರ-ಕುಮಟಾ ಮಾರ್ಗದ ಮಧ್ಯೆ ಅಳ್ಳಿಮಕ್ಕಿ ಎಂಬಲ್ಲಿಂದ ಮಾರ್ಗ ಬದಲಿಸಿಕೊಂಡು ಸುಮಾರು 3 ಕಿ.ಮೀ., ಬುದಗಿತ್ತಿ ಎಂಬ ಹಳ್ಳಿಯವರೆಗೆ ಮಾರ್ಗ ಸರಿಯಾಗಿದ್ದು ಸ್ವಂತ ವಾಹನವಿದ್ದರೆ ಇಲ್ಲಿಯವರೆಗೂ ಹೋಗಬಹುದು.

How to Reach:
Bangalore To Sirsi To Siddapura To Burude Falls.

Burude Falls is 28 Kms from Siddapura. On the way to Kumta from Siddapur, you will find village Allimakki  and take a walk for 3-5 kms to reach the waterfall. 

Distance:
Bangalore to Sirsi - 409 Kms
Sirsi to Siddapura - 40 Kms   

 

No comments:

Post a Comment